ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಗಲ್ನಿಸಿಅನು, ಮೈಹೇಲ್
ಕಗಲ್ನಿಸಿಅನು, ಮೈಹೇಲ್ : 1817-91. ರುಮೇನಿಯದಲ್ಲಿ ಆಧುನಿಕ ಇತಿಹಾಸ ಲೇಖನವನ್ನು ಆರಂಭಿಸಿದಾತ, ಸಾಹಿತ್ಯ, ರಾಜಕಾರಣ, ಇತಿಹಾಸ ಕ್ಷೇತ್ರಗಳಲ್ಲಿ ಅಪ್ರತಿಮ ದೇಶಪ್ರೇಮವನ್ನು ಮೆರೆದ ಪ್ರತಿಭಾನ್ವಿತ ವ್ಯಕ್ತಿ. ಇಯಾಸಿ ಎಂಬಲ್ಲಿ ಹುಟ್ಟಿ, ಫ್ರಾನ್ಸಿನ ಲುನೆವಿಲ್ ಮತ್ತು ಬರ್ಲಿನ್ ವಿಶ್ವವಿದ್ಯಾನಿಲಯಗಳಲಿದ್ದುಕೊಂಡು ಪ್ರಥಮವಾಗಿ ರುಮೇನಿಯದ ಚರಿತ್ರೆಯನ್ನು ನಾನಾ ಮೂಲಗಳಿಂದ ಸಂಪಾದಿಸಿ ಬರೆದ; ರುಮೇನಿಯನ್ ಭಾಷೆ ಹಾಗೂ ಸಾಹಿತ್ಯದ ಸಮೀಕ್ಷೆಯನ್ನೂ ನಡೆಸಿದ.
ತನ್ನ ಇಪ್ಪತ್ತಾರನೆಯ ವಯಸ್ಸಿನಲ್ಲಿಯೇ ಮೈಹೇಲಿಯ ಅಕೆಡಮಿಯಲ್ಲಿ ರಾಷ್ಟ್ರ ಚರಿತ್ರೆಯ ಬಗ್ಗೆ ಉಪನ್ಯಾಸ ಮಾಡಿದ. ರುಮೇನಿಯದ ಭಾಗವಾದ ಮಾಲ್ಡೇವಿಯದ ಪ್ರಾಚೀನ ಚರಿತ್ರೆಯನ್ನು ಸಂಪಾದಿಸಿ ಪ್ರಕಟಿಸಿದ. ಇದಲ್ಲದೆ ಅಹೆರ್ೃವ ರೂಮೆನಸ್ಕ ಎಂಬ ಚಾರಿತ್ರಿಕಪತ್ರಾಗಾರ ವಿಮರ್ಶಾಪತ್ರಿಕೆಯನ್ನೂ ಆರಂಭಿಸಿದ. ಸಾಹಿತ್ಯಕ್ಷೇತ್ರದಲ್ಲಿ ಡೇಸಿಯ ಲಿಟರೆರ ಎಂಬ ವಿಮರ್ಶಾಪತ್ರಿಕೆಯನ್ನೂ ಸ್ಥಾಪಿಸಿ, ಸಾಂಪ್ರದಾಯಿಕತೆಯನ್ನು ಬೆಳೆಸಿದ.
ಪ್ರಗತಿಪರ ಸುಧಾರಣೆಯೇ ಈತನ ರಾಜಕೀಯ ಚಟುವಟಿಕೆಯ ಗುರಿ, ಹೀಗಾಗಿ ಸರ್ಕಾರವನ್ನು ಎದುರಿಸಿದುದರಿಂದ 1846ರಲ್ಲಿ ಗಡಿಪಾರಾದ, ಫ್ರಾನ್ಸ್ ಸ್ಪೇನ್ಗಳಲ್ಲಿ ಸಂಚರಿಸಿ 1848ರಲ್ಲಿ ಹಿಂದಿರುಗಿ, ಮಾಲ್ಡೇವಿಯ-ವಾಲೇಷಿಯ ಪ್ರಾಂತ್ಯಗಳು ಒಂದುಗೂಡಬೇಕೆಂಬ ಪ್ರಚಾರವನ್ನು ಆರಂಭಿಸಿ ಅದಕ್ಕಾಗಿ ಒಂದು ದಿನಪತ್ರಿಕೆಯನ್ನು ಸ್ಥಾಪಿಸಿದ.
ಹನ್ನೊಂದು ವರ್ಷಗಳ ಅವ್ಯಾಹತ ಹೋರಾಟದ ಅನಂತರ 1859ರಲ್ಲಿ ಮಾಲ್ಡೇವಿಯ, ವಾಲೇಷಿಯ ಪ್ರಾಂತ್ಯಗಳು ಒಂದಾದಾಗ ಕಗಲ್ನಿಸಿಅನು ರಾಜಕುಮಾರನ ಆಪ್ತಸಲಹೆಗಾರನಾದ. 1863ರಲ್ಲಿ ಪ್ರಧಾನಿಯಾಗಿ ನೇಮಕಗೊಂಡು ಭೂಮಾಲೀಕತ್ವ, ಧಾರ್ಮಿಕ ಆಸ್ತಿಗಳು, ಶಿಕ್ಷಣ, ಆಡಳಿತಗಳಲ್ಲಿ ಸುಧಾರಣೆಗಳನ್ನು ಮಾಡಿದ, ಇದರಿಂದ ಆತ ಪ್ರಬಲ ವಿರೋಧವನ್ನು ಎದುರಿಸಬೇಕಾಯಿತು. ಅದರ ಫಲವಾಗಿ 1865ರಲ್ಲಿ ತನ್ನ ಪದವಿಗೆ ರಾಜೀನಾಮೆಯಿತ್ತ. 1876-80ರ ವರೆಗೆ ವಿದೇಶಾಂಗ ಮಂತ್ರಿಯಾಗಿದ್ದ. 1878ರಲ್ಲಿ ದೇಶದ ಪ್ರತಿನಿಧಿಯಾಗಿ ಬರ್ಲಿನ್ ಕಾಂಗ್ರೆಸ್ನಲ್ಲಿ ಭಾಗವಹಿಸಿ ರುಮೇನಿಯದ ಸ್ವಾತಂತ್ರ್ಯಕ್ಕೆ ಮನ್ನಣೆ ದೊರಕಿಸಿದ. 1891ರಲ್ಲಿ ಪ್ಯಾರಿಸಿನಲ್ಲಿ ನಿಧನನಾದ. (ಟಿ.ವಿ.ಎಸ್.)