ವಿಷಯಕ್ಕೆ ಹೋಗು

ಜಾಂಬೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಂಬೀ - ಇಂಡೋನೇಷ್ಯ ಗಣರಾಜ್ಯದ ಸುಮಾತ್ರ ದ್ವೀಪಕ್ಕೆ ಸೇರಿದ ಒಂದು ಪ್ರಾಂತ್ಯ ; ಆ ಪ್ರಾಂತ್ಯದ ಆಡಳಿತ ಕೇಂದ್ರ.

ಭೌಗೋಲಿಕ ಮಾಹಿತಿ

[ಬದಲಾಯಿಸಿ]

ದ್ವೀಪದ ಪೂರ್ವ ಅಂಚಿನಿಂದ ಹಿಡಿದು ಪಶ್ಚಿಮ ತೀರದ ಪರ್ವತ ಪ್ರದೇಶಗಳವರೆಗೆ ಈ ಪ್ರಾಂತ್ಯ ವ್ಯಾಪಿಸಿದೆ. ವಿಸ್ತೀರ್ಣ 17,345 ಚ.ಮೈ. ಜನಸಂಖ್ಯೆ 9,39,000 (1970), ಇಲ್ಲಿಯ ಎತ್ತರವಾದ ಶಿಖರಗಳು ಕರಿಂಚೀ (12,483`) ಮತ್ತು ಮಸುರೀಯ (9,629`). ಪ್ರಾಂತ್ಯದ ಮಧ್ಯಭಾಗದ ಪರ್ವತಪ್ರದೇಶದ ವಿನಾ ಉಳಿದ ಭೂಪ್ರದೇಶ ಸಮುದ್ರದತ್ತ ಕ್ರಮಕ್ರಮವಾಗಿ ತಗ್ಗಿ ಸಾಗುವ ಇಳುಕಲು ಭೂಮಿ. ಈ ಭೂಪ್ರದೇಶದಲ್ಲಿ ಜೌಗು ಭಾಗವೇ ಹೆಚ್ಚು. ಪೂರ್ವ ತೀರದಲ್ಲಿ ಅನೇಕ ಕಿರುನದಿಗಳು ಪರಸ್ಪರ ಹೆಣೆದುಕೊಂಡು ಹರಿಯುತ್ತವೆ. ಪರ್ವತಗಳಿಂದ ಇಳಿದು ಬರುವ ಹಿರಿಯ ನದಿಗಳು ಒಟ್ಟುಗೂಡಿ ಬಾಟಿಂಗ್ ಹಾರೀ ಎಂಬ ನದಿಯಾಗಿ ಪರಿಣಮಿಸುತ್ತದೆ. ಈ ನದಿಯ ಮೇಲೆ ಜಾಂಬೀ ನಗರದಿಂದ ಸಮುದ್ರತೀರಕ್ಕೆ 50 ಮೈಲಿಗಳಷ್ಟು ದೂರ ಕಡಲ ನೌಕೆಗಳ ಸಂಚಾರವುಂಟು. ಕಿರುನೌಕೆಗಳ ಯಾನ ಹೆಚ್ಚು.

ಉದ್ಯೋಗ, ವ್ಯವಸಾಯ, ಕೈಗಾರಿಕೆ

[ಬದಲಾಯಿಸಿ]

ಈ ಪ್ರಾಂತ್ಯದ ಜನರ ಮುಖ್ಯ ಕಸುಬು ವ್ಯವಸಾಯ ಮತ್ತು ಮೀನುಗಾರಿಕೆ. ಬತ್ತ, ರಬ್ಬರ್, ತೆಂಗು, ಹತ್ತಿಗಳನ್ನು ಹೇರಳವಾಗಿ ಬೆಳೆಯುತ್ತಾರೆ. ಜಾಂಬೀನಗರದ ನೈಋತ್ಯ ಪ್ರದೇಶದಲ್ಲಿ ಪೆಟ್ರೋಲ್ ಸಿಗುತ್ತದೆ.

ಜಾಂಬೀ ನಗರ

[ಬದಲಾಯಿಸಿ]

ಜಾಂಬೀ ನಗರವು ಈ ಪ್ರಾಂತ್ಯದ ಆಡಳಿತ ಕೇಂದ್ರ; ಬಾಟಿಂಗ್ ಹಾರೀ ನದಿಯ ಎರಡೂ ದಂಡೆಗಳ ಮೇಲೆ ಹಬ್ಬಿದೆ. ಜನಸಂಖ್ಯೆ 1,13,080 (1961). ಸು.1100ದಿಂದ ಇದು ಮಲಯ ರಾಜ್ಯದ ರಾಜಧಾನಿಯಾಗಿತ್ತು. 1916ರಲ್ಲಿ ಡಚ್ಚರ ವಶವಾಯಿತು; 2ನೆಯ ಮಹಾಯುದ್ಧ ಕಾಲದಲ್ಲಿ (1939-45) ಜಪಾನೀಯರು ಇದನ್ನು ಆಕ್ರಮಿಸಿಕೊಂಡಿದ್ದರು. 1946ರಲ್ಲಿ ಇದು ಇಂಡೋನೇಷ್ಯ ಗಣರಾಜ್ಯದ ಭಾಗವಾಯಿತು.

ಈ ಒಳನಾಡ ರೇವುಪಟ್ಟಣದಿಂದ ಜಾವ, ಸುಮಾತ್ರ ಮತ್ತು ಸಿಂಗಪುರಗಳಿಗೆ ಸಂಪರ್ಕವಿದೆ. ಇಲ್ಲಿಂದ ರಬ್ಬರ್, ಬೆತ್ತ, ನೀಲಿ, ಚೌಬೀನೆ ರಫ್ತಾಗುತ್ತವೆ. ನಗರದ ದಕ್ಷಿಣದಲ್ಲಿ ಪಾಲಂಬಾಂಗ್‍ವರೆಗೆ, ಪಶ್ಚಿಮದಲ್ಲಿ ಪಶ್ಚಿಮತೀರದವರೆಗೆ ಉತ್ತಮ ರಸ್ತೆಗಳುಂಟು. ಜಕಾರ್ತ ಮೊದಲಾದ ಸ್ಥಳಗಳಿಗೆ ಒಳನಾಡ ವಿಮಾನ ಸಂಪರ್ಕವಿದೆ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: