ವಿಷಯಕ್ಕೆ ಹೋಗು

ಝಾಕ್ ಲೂಯಿಸ್ ಡಾವೀಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಝಾಕ್ ಲೂಯಿಸ್ ಡಾವೀಡ್ (1748-1825). ಫ್ರಾನ್ಸಿನ ಮಹಾಕ್ರಾಂತಿಯ ಕಾಲದ ಪ್ರಸಿದ್ಧ ಫ್ರೆಂಚ್ ಭಾವಚಿತ್ರಕಾರ. ಶ್ರೀಮಂತರ ಸ್ವತ್ತಾಗಿದ್ದ ಚಿತ್ರಕಲೆ ಮಧ್ಯಮವರ್ಗದ ಜನಸಾಮಾನ್ಯರಿಗೂ ಸಾಧ್ಯವಾಗುವಂತೆ ಮಾಡಿದ ಶ್ರೇಷ್ಠ ಕಲಾವಿದ.

ಸ್ವ-ಚಿತ್ರಣ

ಬದುಕು ಮತ್ತು ಕಲೆ

[ಬದಲಾಯಿಸಿ]

ಈತ ಪ್ಯಾರಿಸ್‍ನಲ್ಲಿ ಶ್ರೀಮಂತ ಬೂಜ್ರ್ವಾ ಕುಟುಂಬದಲ್ಲಿ ಹುಟ್ಟಿದ. 1766ರಲ್ಲಿ ರಾಯಲ್ ಅಕಾಡೆಮಿಯನ್ನು ಸೇರಿ ಅಲ್ಲಿ ಜೆ.ಎನ್. ವೀಯನ್ ಎಂಬಾತನ ಬಳಿ ಸುಮಾರು ಎಂಟು ವರ್ಷ ಕಾಲ ಅಧ್ಯಯನ ನಡೆಸಿದ. ಮೊದಲು ಎರಡು ಬಾರಿ ಸೋತರೂ ಮೂರನೆಯ ಪ್ರಯತ್ನದಲ್ಲಿ ಪ್ರಿ ಡಿ ರೋಮ್ ಪ್ರಶಸ್ತಿ ಗಳಿಸಿದ. ಇಟಲಿಯಲ್ಲಿ ಪ್ರವಾಸ ಮಾಡುತ್ತಿದ್ದಾಗ ಅಲ್ಲಿನ ಪ್ರಾಚೀನ ಕಲಾವಶೇಷಗಳನ್ನು ರೆನಸಾನ್ಸ್ ಕಾಲದ ಚಿತ್ರಕಲೆಯನ್ನು ಕಂಡು ಹರ್ಷ ಪುಳಕಿತನಾದ. ಮುಂದೆ ಅದೇ ಈತನ ಕಲಾಸೃಷ್ಟಿಗೆ ಮುಖ್ಯ ಪ್ರೇರಣೆಯಾಯಿತು. ವಿಂಕಲ್‍ಮಾನ್, ಫೂಸನ್ ಮುಂತಾದವರ ಕೃತಿಗಳ ಪ್ರಭಾವದಿಂದ ಇವನಿಗೆ ನಿಯೋಕ್ಲಾಸಿಕಲ್ ಕಲಾಪರಂಪರೆಯಲ್ಲಿ ವಿಶೇಷ ಅಭಿರುಚಿ ಹುಟ್ಟಿತು. ಆಗ ಬರೆದ ಈತನ ಭಿಕ್ಷೆ ಬೇಡುತ್ತಿರುವ ಬೆಲಿಸೇರಿಯಾಸ್ ಎಂಬ ಚಿತ್ರ ವಿಶೇಷ ಮನ್ನಣೆ ಗಳಿಸಿತು. ಅನಂತರ ಈತ ಗ್ರೀಕ್ ಮತ್ತು ರೋಮನ್ ಪುರಾಣೇತಿಹಾಸಗಳಿಂದ ಸ್ಫೂರ್ತಿ ಪಡೆದು ರಚಿಸಿದ ಕೃತಿಗಳಲ್ಲಿ ದಿ ಡೆತ್ ಆಫ್ ಸಾಕ್ರಟೀಸ್ (1787, ಸಾಕ್ರಟೀಸನ ಮರಣ) ಮುಖ್ಯವಾದುದು. ಈತ ತನ್ನ ಚಿತ್ರಗಳ ಮೂಲಕ ಸಾಮಾನ್ಯ ಹಾಗೂ ಮಧ್ಯಮವರ್ಗದ ಜನರಲ್ಲಿ ಕಲಾಭಿರುಚಿ ಹುಟ್ಟುವಂತೆ ಮಾಡಿದ. ಕಲೆಯನ್ನು ನೀತಿಪ್ರತಿಪಾದನೆಗೆ ಬಳಸಬೇಕೇ ವಿನಾ ಕೇವಲ ಮನೋರಂಜನೆಗೆ ಅಲ್ಲ ಅನ್ನುವುದು ಈತನ ಅಭಿಮತ.

ಫ್ರಾನ್ಸಿನ ಮಹಾಕ್ರಾಂತಿಯ ಸಮಯದಲ್ಲಿ (1789-1799) ಈತ ಕ್ರಾಂತಿಕಾರರ ಪಕ್ಷವಹಿಸಿ ಕೆಲವು ಉತ್ತಮ ಕೃತಿಗಳನ್ನು ರಚಿಸಿದ. ಓತ್ ಆಫ್ ದಿ ಟೆನಿಸ್ ಕೋರ್ಟ್ (1791) ಎಂಬ ಈತನ ಅಪೂರ್ಣ ಚಿತ್ರ ಕ್ರಾಂತಿಯ ಪ್ರತಿಗಾಮಿ ನಾಯಕರ ವ್ಯಕ್ತಿತ್ವಗಳನ್ನು ಚೆನ್ನಾಗಿ ಪ್ರತಿರೂಪಿಸುತ್ತದೆ. ಅಲ್ಲದೆ ಈತ ಕ್ರಾಂತಿಯ ಹುತಾತ್ಮರ ನೆನಪಿಗಾಗಿ ಕೆಲವು ಭಾವಚಿತ್ರಗಳನ್ನು ಬರೆದ. ಅವುಗಳಲ್ಲಿ ಮಾರತ್, ಜೋಸೆಫ್ ಬರ್ರಾ ಮುಂತಾದವು ಅಪೂರ್ವ ಕಲಾಕೃತಿಗಳು. ಕ್ರಾಂತಿ ನಾಯಕರ ನಿಕಟವರ್ತಿಯಾಗಿದ್ದ ಈತನನ್ನು 1792ರಲ್ಲಿ ರಾಷ್ಟ್ರೀಯ ಸಭೆಗೆ (ನ್ಯಾಷನಲ್ ಕನ್‍ವೆನ್‍ಷನ್) ಚುನಾಯಿಸಿ ನೂತನ ಪ್ರಜಾರಾಜ್ಯದ ಕಲೆಸಂಸ್ಕೃತಿ ಮುಂತಾದವುಗಳ ಮೇಲ್ವಿಚಾರಣೆಯನ್ನು ಈತನಿಗೆ ವಹಿಸಲಾಯಿತು. ಈತನ ಸ್ನೇಹಿತ ಕ್ರಾಂತಿಕಾರಿ ರೋಬ್ಸ್‍ಪಿಯರ್‍ನ ಪತನಾನಂತರ ಈತನನ್ನು ಬಂಧನದಲ್ಲಿಡಲಾಯಿತು. ಆ ಸುಮಾರಿನಲ್ಲಿ ಈತ ಬರೆದ ದಿ ರೇಪ್ ಆಫ್ ದಿ ಸ್ಯಾಬೈನ್ ವಿಮೆನ್ ಎಂಬ ಅನ್ಯಾದೃಶ ವರ್ಣಚಿತ್ರದಲ್ಲಿ ಯುದ್ಧದ ದಾರುಣ ದುರಂತವನ್ನು ಚಿತ್ರಿಸಿದ. ನೆಪೋಲಿಯನ್ ಅಧಿಕಾರಕ್ಕೆ ಬಂದ ಕೂಡಲೇ ಡಾವೀಡ್‍ನ ಬದುಕಿನ ಹೊಸಯುಗ ಪ್ರಾರಂಭವಾಯಿತೆನ್ನಬಹುದು. ಈತನ ಪ್ರತಿಭೆಯನ್ನು ಮೆಚ್ಚಿಕೊಂಡು ನೆಪೋಲಿಯನ್ ಈತನನ್ನು ಆಸ್ಥಾನದ ಚಿತ್ರಕಾರನನ್ನಾಗಿ ನೇಮಿಸಿದ. ಈತ ನೆಪೋಲಿಯನ್ನನ ಜೀವನದ ಪ್ರಮುಖ ಘಟನೆಗಳನ್ನು ತನ್ನ ಹಲವು ಕೃತಿಗಳಲ್ಲಿ ಚಿತ್ರಿಸಿದ. ಸಮಕಾಲೀನ ವ್ಯಕ್ತಿಗಳನ್ನು ಆಯಾಕಾಲದ ಪರಿಸರಕ್ಕೆ ಹೊಂದುವಂತೆ ಚಿತ್ರಿಸಿ ಕೆಲವು ಉತ್ತ್ಕೃಷ್ಟ ಸ್ತಬ್ಧಚಿತ್ರ (ಟ್ಯಾಬ್ಲೋ) ಗಳನ್ನು ರಚಿಸಿ ಹೊಸದೊಂದು ರಚನಾವಿಧಾನವನ್ನೇ ಕಂಡುಹಿಡಿದ. ನೆಪೋಲಿಯನ್ನನ ಪತನವಾದಾಗ ಡಾವೀಡ್ ದೇಶ ಬಿಟ್ಟು ಹೋದ.

1816ರಿಂದ 1825ರವರೆಗೆ ಬ್ರಸಲ್ಸ್‍ನಲ್ಲಿದ್ದು ಅಮೂರ್ ಅಂಡ್ ಸೈಕಿ (1817) ಮತ್ತು ಮಾರ್ಸ್ ಡಿಸ್‍ಅರಮ್ಡ್ ಬೈ ವೀನಸ್ (1824) ಮುಂತಾದ ಚಿತ್ರಗಳನ್ನು ಬರೆದು ನಿಚ್ಚಳ ವಸ್ತುನಿಷ್ಠೆ, ಸೂಕ್ಷ್ಮ ದೃಷ್ಟಿ ಇವುಗಳಿಂದ ತುಂಬಿ ತುಳುಕುವ ಈತನ ವರ್ಣಚಿತ್ರಗಳು ನಿಯೋಕ್ಲಾಸಿಕಲ್ ಪರಂಪರೆಯ ಶ್ರೇಷ್ಠ ಅಭಿವ್ಯಕ್ತಿಗಳಾಗಿವೆ. ಈತ ಹದಿನೆಂಟನೆಯ ಶತಮಾನದ ರೊಕೊಕೊ ಸಂಪ್ರದಾಯ ಹಾಗೂ ಹತ್ತೊಂಬತ್ತನೆಯ ಶತಮಾನದ ವಾಸ್ತವಿಕ ಪರಂಪರೆಗಳ ನಡುವಣ ಸೇತುವೆಯಂತಿದ್ದಾನೆ. ಈತ ಒಬ್ಬ ಅಸಾಧಾರಣ ಕಲಾಶಿಕ್ಷಕನಾಗಿದ್ದು, ತನ್ನ ಶಿಷ್ಯರು ಸ್ವಪ್ರೇರಣೆಯಿಂದಲೇ ಸ್ವೋಪಜ್ಞತೆಯನ್ನು ಬೆಳೆಸಿಕೊಳ್ಳಬೇಕೆಂದು ಬೋಧಿಸುತ್ತಿದ್ದನಂತೆ-ಆದರೆ 19ನೆಯ ಶತಮಾನದ ಪಂಡಿತರು ಈತನ ಅಭಿಪ್ರಾಯಗಳನ್ನು ತಪ್ಪಾಗಿ ಗ್ರಹಿಸಿ ಅವನ್ನು ಕಠಿಣ ಸೂತ್ರಗಳನ್ನಾಗಿ ಪರಿವರ್ತಿಸಿದುದು ದುರದೃಷ್ಟಕರ ಸಂಗತಿ. ಈತನಿಂದ ವಿಶೇಷವಾದ ಸ್ಫೂರ್ತಿಯನ್ನು ಪಡೆದವರಲ್ಲಿ ಪ್ರಸಿದ್ಧ ಕಲಾವಿದರಾದ ಝಾರಿಕೋ, ಡಲಾಕ್ರ್ವಾ ಮುಂತಾದವರು.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: