ವಿಷಯಕ್ಕೆ ಹೋಗು

ಫ್ರಾನ್ಸಿಸ್ ಗಾಲ್ಟನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಫ್ರಾನ್ಸಿಸ್ ಗಾಲ್ಟನ್ (1822-1911) ಪ್ರಸಿದ್ಧ ವಿಜ್ಞಾನಿ.

ಬದುಕು, ಸಾಧನೆ

[ಬದಲಾಯಿಸಿ]

ಹುಟ್ಟಿದ್ದು ಬರ್ಮಿಂಗ್ಹ್ಯಾಮಿನಲ್ಲಿ. ಈತ ಚಾರ್ಲ್ಸ್ ಡಾರ್ವಿನ್ನನ ಸಮೀಪಬಂಧು. ಕಿಂಗ್ ಎಡ್ವರ್ಡ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಲಂಡನ್ನಿನ ಕಿಂಗ್ಸ ಕಾಲೇಜಿನಲ್ಲಿ ವೈದ್ಯವಿಜ್ಞಾನವನ್ನು ಓದಿದ. ಅನಂತರ ಕೇಂಬ್ರಿಜಿನಲ್ಲಿ ಗಣಿತ ಶಾಸ್ತ್ರವನ್ನು ಅಭ್ಯಸಿಸಿದ. ಆವರೆಗೂ ಯಾರ ಕಣ್ಣಿಗೂ ಬೀಳದಿದ್ದ ಆಫ್ರಿಕದ ಡಮರ ಲ್ಯಾಂಡ್ ಮತ್ತು ಇತರ ಭಾಗಗಳನ್ನೂ ನೋಡಿ ಬಂದು ಟ್ರಾಪಿಕಲ್ ಸೌತ್ ಆಫ್ರಿಕ (1853) ಮತ್ತು ದಿ ಆರ್ಟ್ ಆಫ್ ಟ್ರ್ಯಾವಲ್ (1855) ಎಂಬ ಪುಸ್ತಕಗಳನ್ನು ಬರೆದ. 1856 ರಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ಚುನಾಯಿತನಾದ. 1863ರಿಂದ 1867ರವರೆಗೆ ಬ್ರಿಟಿಷ್ ಅಸೋಸಿಯೇಷನಿನ ವಿಜ್ಞಾನಾಭಿವೃದ್ಧಿ ಶಾಖೆಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ. ಪವನಶಾಸ್ತ್ರದ ಬಗ್ಗೆ ಗಮನಾರ್ಹವಾದ ಕೆಲಸ ಮಾಡಿದ. ಈತ ಅನುವಂಶೀಯತೆಯ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಹೆರೆಡಿಟರಿ ಕಾಸಸ್ (1869) ಹ್ಯೂಮನ್ ಫ್ಯಾಕಲ್ಟಿ (1883), ನ್ಯಾಚುರಲ್ ಇನ್ಹೆರಿಟೆನ್ಸ (1869), ನೋಟ್ವರ್ದಿ ಫ್ಯಾಮಿಲೀಸ್ (1906) ಎಂಬ ಗ್ರಂಥಗಳನ್ನು ಬರೆದ. ಶಾಶ್ವತ ನಿಧಿ ಕೊಟ್ಟು ಲಂಡನ್ ವಿಶ್ವ ವಿದ್ಯಾಲಯದಲ್ಲಿ ಉತ್ತಮ ಸಂತಾನವಿಜ್ಞಾನ ವಿಭಾಗವನ್ನು ತೆರೆಯಲು ಕಾರಣಕರ್ತನಾದ. ಕೊಲೆ ಮುಂತಾದ ಅಪರಾಧಗಳ ತನಿಖೆಯಲ್ಲಿ ಬೆರಳು ಗುರುತು ಗಳನ್ನು ತಿಳಿದು ಪತ್ತೆ ಹಚ್ಚುವ ಸಂಶೋಧನಾ ವಿಧಾನವನ್ನು ಜಾರಿಗೆ ತಂದವರಲ್ಲಿ ಈತನೇ ಮೊದಲಿಗ. 1909 ರಲ್ಲಿ ಈತನಿಗೆ ನೈಟ್ ಹುಡ್ ದೊರಕಿತು.[]

ಸಂಖ್ಯಾಕಲನ ಪದ್ಧತಿ ಯನ್ನು ವಿಶೇಷವಾಗಿ ಈತ ಬಳಕೆಗೆ ತಂದ. ಶ್ರೀಮಂತ ಕುಟುಂಬದವನಾದುದರಿಂದ ಯಾವೊಂದು ಹುದ್ದೆಗೂ ಅಂಟದೆ ಕೊನೆಯವರೆಗೂ ಈತ ಸ್ವತಂತ್ರ್ಯವಾದ ಸಂಶೋಧನೆ ಮತ್ತು ಅಧ್ಯಯನಗಳನ್ನು ನಡೆಸಿದ. ತುಂಬು ಪ್ರತಿಭಾವಂತನಾದ ಈತನಲ್ಲಿ ಅಮಿತವಾದ ಆಸಕ್ತಿ. ಅದ್ಭುತವಾದ ಕಲ್ಪನೆಯಿದ್ದುದರಿಂದ ಹೊಸ ಹೊಸ ಸಂಶೋಧನೆಗಳಿಗೆ ಬುನಾದಿ ಹಾಕಿದ. ಮಾನವ ಕಪಾಲಮಾಪನ, ಉತ್ತಮ ಸಂತಾನವಿಜ್ಞಾನ, ಸಂಖ್ಯಾಕಲನ ವಿಜ್ಞಾನದಲ್ಲಿ ಕ್ವೆಟ್ಲೆಟ್ ಪದ್ಧತಿ, ಬುದ್ಧಿಮಾಪನ ಪರೀಕ್ಷಾ, ಯಂತ್ರರಚನೆ-ಈ ಕ್ಷೇತ್ರಗಳಲ್ಲಿ ಈತ ಆದ್ಯನೆನ್ನಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: