ವಿಷಯಕ್ಕೆ ಹೋಗು

ಹಾರಾಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಹಜ ಹಾರಾಟ: ಝೇಂಕಾರದ ಹಕ್ಕಿ

ಹಾರಾಟ ಎಂದರೆ ಒಂದು ವಸ್ತುವು ಮೇಲ್ಮೈಗೆ ಸಂಪರ್ಕವಿರದಂತೆ ವಾತಾವರಣದ (ಅಥವಾ ಅಂತರಿಕ್ಷಯಾನದ ವಿಷಯದಲ್ಲಿ ಅದರ ಆಚೆಗೆ) ಮೂಲಕ ಚಲಿಸುವ ಪ್ರಕ್ರಿಯೆ. ಮುನ್ನೂಕುವ ಒತ್ತಿಗೆ ಸಂಬಂಧಿಸಿದ ವಾಯುಬಲವಿಜ್ಞಾನ ಸಂಬಂಧಿ ಉತ್ಥಾಪಕ ಬಲವನ್ನು ಸೃಷ್ಟಿಸಿ, ವಾಯುಸಂಸ್ಥಿತಿ ವಿಜ್ಞಾನ ರೀತ್ಯ ಪ್ಲವನಶೀಲತೆ ಬಳಸಿ, ಅಥವಾ ಚಿಮ್ಮು ಚಲನೆ ಮೂಲಕ ಇದನ್ನು ಸಾಧಿಸಬಹುದು. ಅನೇಕ ವಸ್ತುಗಳು ಹಾರಬಲ್ಲವು, ಪಕ್ಷಿಗಳು, ಬಾವಲಿಗಳು ಮತ್ತು ಕೀಟಗಳಂತಹ ಪ್ರಾಕೃತಿಕ ವಿಮಾನ ಚಾಲಕರಿಂದ ಹಿಡಿದು, ವಿಮಾನಗಳು, ಹೆಲಿಕಾಪ್ಟರ್‌ಗಳು, ಬಲೂನುಗಳು, ಮತ್ತು ಬಾಹ್ಯಾಕಾಶ ನೌಕೆಯನ್ನು ಹೊತ್ತೊಯ್ಯಬಹುದಾದ ರಾಕೆಟ್‍ಗಳಂತಹ ಮಾನವ ಆವಿಷ್ಕಾರಗಳವರೆಗೆ.

ಹಾರಾಟದ ಶಿಲ್ಪಶಾಸ್ತ್ರ ಸಂಬಂಧಿ ಅಂಶಗಳು ಅಂತರಿಕ್ಷಯಾನ ಇಂಜಿನಿಯರಿಂಗ್‍ನ ವ್ಯಾಪ್ತಿಗೆ ಒಳಪಡುತ್ತವೆ. ಅಂತರಿಕ್ಷಯಾನ ಇಂಜಿನಿಯರಿಂಗ್ ಅನ್ನು ವೈಮಾನಿಕಶಾಸ್ತ್ರ, ಅಂತರಿಕ್ಷಯಾನ ಶಾಸ್ತ್ರ, ಮತ್ತು ಚಿಮ್ಮುಚಲನ ವಿಜ್ಞಾನ ಎಂದು ಉಪವಿಭಾಜಿಸಲಾಗುತ್ತದೆ. ವೈಮಾನಿಕಶಾಸ್ತ್ರವು ಗಾಳಿಯ ಮೂಲಕ ಚಲಿಸುವ ವಾಹನಗಳ ಅಧ್ಯಯನವಾಗಿದೆ. ಅಂಅತರಿಕ್ಷಯಾನ ಶಾಸ್ತ್ರವು ಅಂತರಿಕ್ಷದಲ್ಲಿ ಚಲಿಸುವ ವಾಹನಗಳ ಅಧ್ಯಯನವಾಗಿದೆ. ಚಿಮ್ಮುಚಲನ ವಿಜ್ಞಾನವು ಉತ್ಕ್ಷೇಪಕಗಳ ಹಾರಾಟದ ಅಧ್ಯಯನವಾಗಿದೆ.

ಹಾರಾಟದ ಹಲವು ಬಗೆಗಳಿವೆ. ಮಾನವರು ಗಾಳಿಗಿಂತ ಹಗುರವಾದ ವಾಹನಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವು ಗಾಳಿಯಲ್ಲಿ ತಮ್ಮ ಪ್ಲವನಶೀಲತೆಯ ಕಾರಣ ನೆಲದಿಂದ ಮೇಲೆ ಏರಿ ಹಾರುತ್ತವೆ. ಇದನ್ನು ತೇಲು ಹಾರಾಟ ಎಂದು ಕರೆಯಲಾಗುತ್ತದೆ. ಹಾರುವ ಕೆಲವು ವಸ್ತುಗಳು ಗಾಳಿಯಲ್ಲಿ ಮುನ್ನೂಕು ಒತ್ತನ್ನು ಸೃಷ್ಟಿಸುವುದಿಲ್ಲ, ಉದಾಹರಣೆಗೆ ಹಾರುವ ಅಳಿಲು. ಇದನ್ನು ಗ್ಲೈಡಿಂಗ್ ಎಂದು ಕರೆಯಲಾಗುತ್ತದೆ. ಹಿಂಸ್ರಪಕ್ಷಿಗಳು ಮತ್ತು ಮಾನವನಿರ್ಮಿತ ಹಾಯಿ ವಿಮಾನಗಳಂತಹ ಕೆಲವು ಇತರ ವಸ್ತುಗಳು ಏರುಗಾಳಿಯನ್ನು ಏರಲು ಬಳಸಿಕೊಳ್ಳಬಲ್ಲವು. ಇದನ್ನು ಏರುವಿಕೆ ಎಂದು ಕರೆಯಲಾಗುತ್ತದೆ. ಆದರೆ ಬಹುತೇಕ ಇತರ ಪಕ್ಷಿಗಳು, ಬಾವಲಿಗಳು, ಕೀಟಗಳು ಮತ್ತು ಎಲ್ಲ ಇಂಧನದಿಂದ ಚಲಿಸುವ ವಿಮಾನಗಳಿಗೆ ಮುಂದೂಡಿಕೆಯ ಮೂಲ ಬೇಕಾಗುತ್ತದೆ. ಇದನ್ನು ಶಕ್ತಿ ಚಾಲಿತ ಹಾರಾಟ ಎಂದು ಕರೆಯಲಾಗುತ್ತದೆ. ಯಾಂತ್ರಿಕ ಹಾರಾಟವೆಂದರೆ ಹಾರಲು ಯಂತ್ರದ ಬಳಕೆ. ಇಂತಹ ಯಂತ್ರಗಳಲ್ಲಿ ವಿಮಾನಗಳು, ಗ್ಲೈಡರ್‌ಗಳು, ಹೆಲಿಕಾಪ್ಟರ್‌ಗಳು, ಗಿರಿಗಟ್ಟೆ ವಿಮಾನಗಳು, ವಾಯುನೌಕೆಗಳು, ಬಲೂನುಗಳು, ಆರ್ನಿಥಾಪ್ಟರ್‌ಗಳು ಜೊತೆಗೆ ಬಾಹ್ಯಾಕಾಶ ನೌಕೆಗಳು ಸೇರಿವೆ. ಮತ್ತೊಂದು ರೂಪದ ಯಾಂತ್ರಿಕ ಹಾರಟವೆಂದರೆ ಪ್ಯಾರಾಸೇಲಿಂಗ್. ಇದರಲ್ಲಿ ಧುಮುಕುಕೊಡೆಯಂತಹ ವಸ್ತುವನ್ನು ಒಂದು ದೋಣಿ ಎಳೆಯುತ್ತದೆ. ಧ್ವನಿವೇಗಾಧಿಕ ಹಾರಾಟವೆಂದರೆ ಶಬ್ದದ ವೇಗಕ್ಕಿಂತ ವೇಗವಾದ ಹಾರಾಟ. ಧ್ವನಿವೇಗಾಧಿಕ ಹಾರಾಟವನ್ನು ಆಘಾತ ತರಂಗಗಳ ರಚನೆಯೊಂದಿಗೆ ಸಂಬಂಧಿಸಲಾಗುತ್ತದೆ. ಈ ತರಂಗಗಳು ಧ್ವನಿ ಗರ್ಜನೆಗಳನ್ನು ರಚಿಸುತ್ತವೆ. ಇವನ್ನು ನೆಲದಿಂದ ಕೇಳಬಹುದು, ಮತ್ತು ಆಗಾಗ್ಗೆ ಬೆಚ್ಚಿಬೀಳಿಸುತ್ತವೆ. ಈ ಆಘಾತ ತರಂಗದ ಸೃಷ್ಟಿಗೆ ಸಾಕಷ್ಟು ಹೆಚ್ಚು ಶಕ್ತಿ ಬೇಕಾಗುತ್ತದೆ.